ಕ್ರಿಸ್ತನ ಚರ್ಚುಗಳು

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲೇ ವಿಶೇಷವಾಗಿ ಕಾಣಬರುವ ಕೆಲವು ಚರ್ಚುಗಳು (ಚರ್ಚ್‍ಸ್ ಆಫ್ ಕ್ರೈಸ್ಟ್). ಈ ಚರ್ಚುಗಳ ಅನುಯಾಯಿಗಳ ಸಂಖ್ಯೆ 1964ರಲ್ಲಿ 22,50,000 ಆಗಿತ್ತು. ಇವರೆಲ್ಲ ತಮ್ಮನ್ನು ಕ್ರಿಶ್ಚನರೆಂದು ಕರೆದುಕೊಳ್ಳುತ್ತಾರೆ. ಹೊಸ ಒಡಂಬಡಿಕೆಯ (ನ್ಯೂ ಟೆಸ್ಟ್ಯಮೆಂಟ್) ಪಾಠದಲ್ಲಿ ಪೂರ್ಣನಂಬಿಕೆ, ಅದರಂತೆ ಆಚರಣೆ-ಇವು ಈ ಪಂಗಡದ ಪ್ರಧಾನ ಅಂಶಗಳು. ಈ ಚರ್ಚುಗಳ ಉಗಮ ಕ್ರಿ.ಶ. 30 ಎಂದು ಅನುಯಾಯಿಗಳು ಹೇಳಿಕೊಳ್ಳುತ್ತಾರೆ. ಆದರೆ ಇವುಗಳ ಆಧುನಿಕ ಇತಿಹಾಸ ಪ್ರಾರಂಭವಾಗುವುದು 19ನೆಯ ಶತಮಾನದಿಂದ. ಈ ಚಳವಳಿ ಮೊದಲು ಇಂಗ್ಲೆಂಡಿನಲ್ಲಿ ಪ್ರಾರಂಭವಾಗಿ, ಅಮೆರಿಕಕ್ಕೆ ವಲಸೆಹೋಗಿ ಅಲ್ಲಿ ಒಂದು ಸ್ಪಷ್ಟ ರೂಪ ತಳೆಯಿತು. ಚಳವಳಿಯ ಅಗ್ರೇಸರ್ ಥಾಮಸ್ ಕ್ಯಾಂಪ್‍ಬೆಲ್ ತನ್ನ ಹೊಸ ವಿಚಾರಗಳಿಗಾಗಿ ಇಂಗ್ಲೆಂಡಿನಲ್ಲಿ ದೂಷಿತನಾಗಿ 1807ರಲ್ಲಿ ಅಮೆರಿಕ ಸಂಯುಕ್ತಸಂಸ್ಥಾನಕ್ಕೆ ಬಂದ. 

	ಮೂಲ ಹೊಸ ಒಡಂಬಡಿಕೆ ಗ್ರಂಥದಲ್ಲಿರುವುದು ಮಾತ್ರ ಪವಿತ್ರಭಾಗ, ಅನುಕರಣೀಯ. ಅನಂತರ ಸೇರಿದ ಭಾಗಗಳನ್ನು ಧಾರ್ಮಿಕ ಗ್ರಂಥದಿಂದ ತೆಗೆದುಹಾಕಬೇಕು. ಮೂಲಗ್ರಂಥದಂತೆ ದೇವರಿಂದ ಎಲ್ಲ ಅಧಿಕಾರಗಳೂ ಕ್ರಿಸ್ತನಿಗೆ ಸೇರಿದ್ದರಿಂದ, ಮಾನವರಾರಿಗೂ ಅಧಿಕಾರ ಹೊಂದುವ ಹಕ್ಕಿಲ್ಲ. ಆದ್ದರಿಂದ ಚರ್ಚಿನ ಆಡಳಿತದಲ್ಲಿ ಅಧಿಕಾರಿಗಳ ನೇಮಕ ಸಲ್ಲದು-ಇವು ಕ್ಯಾಂಪ್‍ಬೆಲನ ವಿಚಾರಗಳು. ಥಾಮಸ್ ಕ್ಯಾಂಪಬೆಲನ ಅನಂತರ ಅವನ ಮಗ ಅಲೆಕ್ಸಾಂಡರ್ ತಂದೆಯ ಚಳವಳಿಯನ್ನು ಮುಂದುವರಿಸಿದ. ಹತ್ತೊಂಬತ್ತನೆಯ ಶತಮಾನದ ಮಧ್ಯದಲ್ಲಿ ಪಂಗಡದ ಕೆಲವರಲ್ಲಿ ಮಿಷನರಿ ಕೆಲಸ ಮತ್ತು ಚರ್ಚಿನಲ್ಲಿ ಆರಾಧನೆಯ ಸಮಯದಲ್ಲಿನ ವಾದ್ಯಸಂಗೀತದ ಬಳಕೆಗಳ ಬಗ್ಗೆ ಭಿನ್ನಾಭಿಪ್ರಾಯ ತಲೆದೋರಿತು. ಕೊನೆಗೆ 1906ರಲ್ಲಿ ಸಂಸ್ಥೆ ಇಬ್ಭಾಗವಾಗಿ ಡಿಸೈಪಲ್ಸ್ ಆಪ್ ಕ್ರೈಸ್ಟ್ (ಕ್ರಿಸ್ತನ ಅನುಯಾಯಿಗಳು) ಮತ್ತು ಚರ್ಚಸ್ ಆಫ್ ಕ್ರೈಸ್ಟ್ ಎಂದು ಎರಡು ಪಂಗಡಗಳಾದುವು. ಕ್ರಿಸ್ತನ ಅನುಯಾಯಿಗಳು ಮಿಷನರಿ ಕೆಲಸ ಹಾಗೂ ಆರಾಧನೆಯ ಸಮಯದಲ್ಲಿ ವಾದ್ಯಸಂಗೀತ ಇಟ್ಟುಕೊಂಡರೆ ಕ್ರಿಸ್ತನ ಚರ್ಚು ಪಂಗಡದವರು ಅವನ್ನು ತ್ಯಜಿಸಿದರು.

	ಇದೊಂದನ್ನು ಬಿಟ್ಟರೆ ಎರಡು ಪಂಗಡದವರ ದೇವತಾರಾಧನೆಯಲ್ಲಿ ವಿಶೇಷ ವ್ಯತ್ಯಾಸವೇನೂ ಇಲ್ಲ. ಹಾಡು, ಉಪದೇಶ ಹಾಗೂ ಪ್ರಭುಭೋಜನ ಇವು ಎರಡು ಪಂಗಡಗಳಲ್ಲೂ ಇವೆ. ಕ್ರಿಸ್ತನ ಚರ್ಚು ಪಂಗಡದವರು ಹೊಸ ಒಡಂಬಡಿಕೆ ಅಪೌರುಷೇಯ ಎಂದು ನಂಬುತ್ತಾರೆ. ಅದರ ಬೇರೆ ಬೇರೆ ಭಾಗಗಳನ್ನು ಬೇರೆ ಬೇರೆಯವರು ಬರೆದರೂ ಅವರಿಗೆ ಮೂಲ ಸತ್‍ಪ್ರೇರಣೆ ಬಂದದ್ದು ದೇವರಿಂದ, ಆದ್ದರಿಂದ ಗ್ರಂಥದಲ್ಲಿರುವುದೆಲ್ಲ ದೇವವಾಕ್ಯ, ಅದನ್ನು ಮೀರತಕ್ಕದ್ದಲ್ಲ- ಎನ್ನುವುದು ಇವರ ಧಾರ್ಮಿಕ ನಂಬಿಕೆ. ಈ ಪಂಗಡದವರ ಧಾರ್ಮಿಕ ಮುಖಂಡರಿಗೆ ರೆವರೆಂಡ್ ಎಂಬ ಹೆಸರಿಲ್ಲ. ಅನುಯಾಯಿಗಳಂತೆ ಇವರಲ್ಲೂ ಧರ್ಮದೀಕ್ಷೆ ಸ್ನಾನದಿಂದಲೇ. ಆದರೆ ಇವರಲ್ಲಿ ದೀಕ್ಷೆ ಕೊಡುವುದು ವಯಸ್ಕನಿಗೆ ಮಾತ್ರ, ಅದೂ ಆತನಿಗೆ ಪಂಗಡದ ಆಚರಣೆಗಳಲ್ಲಿ ಸಂಪೂರ್ಣ ನಂಬಿಕೆ ಇದೆ ಎಂಬುದು ಖಾತ್ರಿ ಆದಾಗ.

	ಅನುಯಾಯಿಗಳಿಂದ ಬೇರ್ಪಟ್ಟ ಅನಂತರ ಚರ್ಚಸ್ ಆಫ್ ಕ್ರೈಸ್ಟ್ ಪಂಗಡ ಅಗಾಧವಾಗಿ ಬೆಳೆಯಿತು. ಕ್ರಿಶ್ಚನ್ ಶಿಕ್ಷಣದಲ್ಲಿ ನಂಬಿಕೆಯುಳ್ಳ ಈ ಸಂಸ್ಥೆ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಅನೇಕ ಕಾಲೇಜುಗಳನ್ನು ನಡೆಸುತ್ತಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ